ಕ್ರೋಟನಾಲ್ಡಿಹೈಡ್

ಅಸಿಟಾಲ್ಡಿಹೈಡಿನ ಎರಡು ಅಣುಗಳು ಅಲ್ಡಾಲ್ ಸಂಘನನ ಕ್ರಿಯೆಗೆ ಒಳಗಾದಾಗ ದೊರೆಯುವ ಉತ್ಪನ್ನ. ಅಣುಸೂತ್ರ CH3CH=CH. CHO. ಔದ್ಯೋಗಿಕವಾಗಿ ದೊರೆಯುವ ಕ್ರೋಟನಾಲ್ಡಿಹೈಡ್ ಟ್ರಾನ್ಸ್ ಸಮರೂಪಿ. ಇದು 102 ° ಸೆಂ. ನಲ್ಲಿ ಕುದಿಯುವ ತಿಳಿನೀರಿನ ಬಣ್ಣದ ದ್ರವ. ಗಾಳಿಗೆ ಮತ್ತು ಬೆಳಕಿಗೆ ಒಡ್ಡಿದಾಗ ನಸು ಹಳದಿಬಣ್ಣಕ್ಕೆ ತಿರುಗುತ್ತದೆ. ಜ್ವಲಿಸಬಲ್ಲ ದ್ರವ. ಘಾಟುವಾಸನೆ ಉಂಟು. ಆವಿಯ ಸಂಪರ್ಕದಲ್ಲಿ ಕಣ್ಣಲ್ಲಿ ಉರಿಯುಂಟಾಗಿ ನೀರು ಬರುತ್ತದೆ. ನೀರಿನಲ್ಲಿ ತುಸುಮಟ್ಟಿಗೆ ಮಾತ್ರ ವಿಲೀನವಾದರೂ ಮದ್ಯಸಾರ, ಈಥರ್, ಬೆಂಜೀನ್, ಟಾಲೀನ್, ಸೀಮೆ ಎಣ್ಣೆಗಳಲ್ಲಿ ಎಲ್ಲ ಪರಿಮಾಣಗಳಲ್ಲಿಯೂ ಬೆರೆಯುತ್ತದೆ. ಓ ಬ್ಯುಟೈಲ್ ಆಲ್ಕೊಹಾಲ್ ಮತ್ತು 2-ಈಥೈಲ್ ಹೆಕ್ಸೈಲ್ ಆಲ್ಕೊಹಾಲುಗಳ ತಯಾರಿಕೆಯಲ್ಲಿ ಇದು ಮಧ್ಯವರ್ತಿ ವಸ್ತು. ವಿಲೀನಕಾರಿಯಾಗಿಯೂ ಉಪಯೋಗ ಉಂಟು. ರಬ್ಬರ್ ವೇಗವರ್ಧಕಗಳ ತಯಾರಿಕೆಯಲ್ಲೂ ರಾಸಾಯನಿಕ ಯುದ್ಧದಲ್ಲೂ ಇದರ ಬಳಕೆ ಅಧಿಕ. ಅನೇಕ ಆಗ್ರ್ಯಾನಿಕ್ ವಸ್ತುಗಳ ಸಂಶ್ಲೇಷಣೆಯಲ್ಲಿ ಅಲ್ಲದೆ ಚರ್ಮವನ್ನು ಹದಮಾಡುವಾಗ ಈಥೈಲ್ ಆಲ್ಕೊಹಾಲಿನೊಂದಿಗೆ ಬೆರೆಸುವಲ್ಲಿ ಈ ವಸ್ತುವನ್ನು ಉಪಯೋಗಿಸುತ್ತಾರೆ.    			     (ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ